ಬಚ್ಚೆ ಸಿಟಿ ರವಿಗಿಂತ ರವಷ್ಟು ನಾನ್ ಹೆಚ್ಚೆ ಅಂದ ನಾಗ್ರಾವು ಸೆಟ್ಟಿ

ಬಿಫೋರ್ ಲಾಸ್ಟ್‌ವೀಕ್ ಮಂಗ್ಳೂರು ಉಳ್ಳಾಲ್ದಾಗೆ ಸಡನ್ನಾಗಿ ಕೋಮುಗಲಭೆ ಬಾಂಬ್ ಸಿಡೀತು. ನಾಕಾರು ದಿನ ಲಾಠಿ ಚಾರ್ಜು ವಾಟರ್ ಬಾಂಬು ಗೋಲಿಬಾರು ೧೪೪ ಸೆಕ್ಷನ್ನು,

ಕರ್ಪ್ಯೂ ಎಲ್ಲಾ ಅಮರಿಕೊಂಡ್ವು. ನೂರಾರು ಜನ ಹ್ಯಾಂಡಿಕ್ಯಾಪ್ಡ್ ಆಗೋದ್ರು ಇಬ್ಬರು ಜೀವಾನೇ ಬಿಟ್ಟರು. ಜೀವ ಹೋದ್ದು ಸಾಬರ್ದು ಅಂತ ಖುಸಿ ಪಟ್ಟೋರು ಅದೇ ಭಜರಂಗಿ ವಿಹೆಚ್‌ಪಿ ಗಳೆಂಬ ಹಳೆ ಪಂಚರಂಗಿಗಳೆ! ಹೊಸ ಸೀರಾಮ ಸೇನೆಯ ಹಳೆ ವಾನರ ಸೇನೆ ಕಿರಾತರೆ! ದನಗುಳ್ನ ಬೇಕಾ ನೂನಿಯಾಗಿ ಕಸಾಯಿ ಖಾನೆಗೆ ಸಪ್ಲೆ ಮಾಡಿದ್ರೆ ಅದನ್ನ ಅಟಾಕ್ ಮಾಡಿ ಪನಿಶ್‌ಮೆಂಟು ಕೊಡಬೇಕಾದೋರು ಫೋಲಿಸ್ ಡಿಪಾಲ್ಟುಮೆಂಟು. ಅವರು ಕ್ರಮ ತಗಳ್ಳಿಲ್ಲ ಅಂತ ಭಜರಂಗಿಗಳೇ ಚಡ್ಡಿ ವರಿಸ್ಕಂಡು ರಂಪ ಮಾಡಿದರು. ದನ ದ ನೆಪ ಒಡ್ಡಿ ಹಿಂದೂ ಮುಸ್ಲಿಮರಿಗೆ ಜಗಳ ತಂದಿಕ್ಕಿ ಕೋಟಿಗಟ್ಟಲೆ ಆಸ್ತಿ ಪಾಸ್ತಿ ನಷ್ಟ, ಪ್ರಾಣಹಾನಿ, ಜೀವಭಯ ಉಂಟು ಮಾಡಿದರು. ಇದಕ್ಕೇನೆಂಬೋಣ? ಜೆಡಿ‌ಎಸ್‌ನ ಬಂಗೇನೆ ಇದಕ್ಕೆಲ್ಲಾ ಉಸ್ತುವಾರಿ ಸಚಿವ ನಾಗ್ರಾವು ಸೆಟ್ಟಿನೇ ಕಾರಣ ಅಂದ.

ಆದರೆ ಕೊಮಾಸಾಮಿಯಾಗ್ಲಿ ಅವರಪ್ಪನಾಗ್ಲಿ ತುಟಿ ಬಿಚ್ಚಲಿಲ್ಲ. ರೋಮ್ ಹತ್ತಿ ಉರಿಯೋವಾಗ ಅದ್ಯಾವನೋ ಪಿಟೀಲು ನುಡಿಸಿದ್ನಂತೆ. ಹಂಗೆ ಮಗ ಹಳ್ಳಿಗೋಗಿ ಮುದ್ದೆಯುಂಡು ನಿದ್ರೆ ತೆಗೆದ್ರೆ ಅಪ್ಪ ಇಪ್ತಿಯಾರ್ ಕೂಟ್ದಾಗೆ ಉಂಡು ಸಾಬನ ತಬ್ಕೊಂಡು, ‘ಮಂಗ್ಳೂನಾಗೆ ಇದೆಲ್ಲಾ ಕಾಮನ್ನು’ ಅಂತ ಸೈಲೆಂಟಾಗಿದ್ದು ಬಿಟ್ರು. ಗೃಹ ಇಲಾಖೆನಾಗಿರೋ ತೆಪ್ಪಿಗೆ ಎಂಪಿ ಪ್ರಕಾಸು ಈ ಗದ್ದಲಕ್ಕೆ ಸಮಿ ಅಂಬೋ ಟ್ರೂಪೇ ಕಾರಣ ಅಂತ ಪ್ರೂಪಿಲ್ದೆ ಮಾತಾಡ್ತ ದಿನ ತಳ್ಳಿತು. ಯಾವಾಗ ಎಲ್ಡು ಹೆಣ ಬಿದ್ವೋ ಪ್ರಕಾಸು ಮಂಗ್ಳೂರು ದಾರಿ ಹಿಡೀತು. ನಾಗ್ರಾವು ಸೆಟ್ಟಿನ ಕ್ಯಾರೆ ಅನ್ಲಿಲ್ಲ. ಪೋಲಿಸರ ಜೊತೆ ಅಡ್ಡಾಡಿ ರಿಪೋರ್ಟ್ ತಗಂಡು ವಾಪಸ್ ಬಂತು. ಏಟು ದಿನವಂತ ಹಿಂದು ಮುಸ್ಲಿಮರು ಬಡಿದಾಡ್ಯಾರು ಹೊಟ್ಟೆಗೆ ಹಿಟ್ಟಿಲ್ದೆ ನಳ್ಳ್ಯಾರು. ಅದ್ರಾಟ್ಗದೆ ಗದ್ದಲ ತಣ್ಣಗಾತು. ಬಿಜೆಪಿ ಸೆಟ್ಟಿಮ್ಯಾಗೆ ಕ್ರಮ ತಗಂಬಂಗಿಲ್ಲ. ಜೆಡಿ‌ಎಸ್ ಬಂಗೇನ ಕೂಗು ದೇವೇಗೌಡ್ರ ಲೋಕ ಮುಟ್ಟಲಿಲ್ಲ.

ಸೆಟ್ಟಿ ಬೋತ್ ಖುಷ್ ಹೋದ. ಕರ್ನಾಟಕ ಮೋದಿ ನಾನೇ ಅಂತ ಬೀಗಿದ. ಚಿಕ್ಕಮಗಳೂರಿನ ಬಚ್ಚೆ ರವಿಗಿಂತ ನಾನ್ ರವಷ್ಟು ಹೆಚ್ಚೆ. ಮಂಗ್ಳೂನ ಸೆಕಂಡ್ ಅಯೋಧ್ಯಮಾಡ್ತೀನಿ ಮಂತ್ರಿಗಿರಿ ಹೋದ್ರೆ ಷಂಟ ಹೋತು. ಪೇಜಾವರ ಮೇಲಾಣೆ ಅಂತ ಚಾಲೆಂಜ್‌ಗಿಳಿದ. ಸಿಟಿ ರವಿ ಅಂಬೋನು ಸದಾ ಹಲ್ಲುಗಿಂಜೋ ಸದಾನಂದಗೋಡ್ನ ಮುಂದಿಟ್ಕಂಡು ರೌಡಿಗುಳಂಗೆ ಬ್ಯಾರಿಕೇಡ್ ಮುರಿತಾ ಪೋಲಿಸ್ನೋನ ತಳ್ಳಾಡೋದೇ ಹಿರೋಯಿಸಂ ಅಂದ್ಕೊಂಡವ್ನೆ. ಹಿಂದುತ್ವ ಉಳಿಬೇಕಂದ್ರೆ ಬರಿ ಕೂಗಾಟದಿಂದ ನೋ ಯೂಸ್. ಖೂನಿಗಳಾಗ್ಬೇಕು ಹೆಣ ಬೀಳ್ಬೇಕು ದಟ್ ಈಸ್ ಮೈ ವೇಟೇಜ್.

ದೀಪಾವಳಿ ಬರೋಕೆ ಮೊದ್ಲೆ ಮಂಗ್ಳೂನೆ ಪಟಾಕಿ ಮಾಡ್ಕೊಂಡು ಹಂಗೆ ಬೆಂಕಿ ಇಕ್ದೆ ನೋಡಿದ್ರಲ್ಲ. ನಾನೇ ಅಸಲಿ ಹಿರೋ ಅಂತ ಸಿಟಿ ರವಿನಾ ಇನ್‌ಡೈರಕ್ಟಾಗಿ ಕಂಡೆಮ್ ಮಾಡಿದ್ದು ನೋಡಿ ನನ್ಗೂ ಈ ಹೊಸ ಹೀರೋನ ಇಂಟ್ರು ಮಾಡೋ ಕ್ಯೂರಿಯಾಸಿಟಿ ಆತು. ಶ್ಯಾನೆ ಕಸ್ಟ ಪಟ್ಟು ಆವಯ್ಯನ ಪೋನು ನಂಬರ್ ಹುಡುಕಿ ಫೋನ್ ಮಾಡ್ದೆ. ಆ ಕಡೆಯಿಂದ ಹಲೋ ಯಾರ್ರಿ ಅಂತ ಒಡಕು ದನಿ ಕೇಳ್ತು. ಸಾ ತಾವು ನಾಗ್ರಾವು ಸೆಟ್ಟಿನಾ? ಕೇಳ್ದೆ. ಅಲ್ರಿ ನಾಗರಾಜ ಸೆಟ್ಟಿ ಮಾರಾಯ್ರ. ಎಂತ ಹೇಳಿ. ಅಷ್ಟಕ್ಕೂ ನೀವು ಯಾರುಂಟು?/ ನಾನು ಲಂಕೇಸ ಪತ್ರಿಕೆ ರಿಪೋಟ್ರು ಸಾ/ ಎಲ್ಡು ಅದಾವಲ್ರಿ ಅವು ನಮ್ದು ಲಂಕೇಶ್ ಸನ್ದು/ ನನ್ನ ಬಳಿ ಎಂತಕ್ಕೆ ಮಾತು ನಮ್ಮನ್ನ ಕಂಡ್ರೇನೆ ನಿಮ್ಗೆ ಆಗುವುದಿಲ್ಲವೋ/ಸಾರಿ ಸಾ. ತಾವು ಯಾರು ಎತ್ತ ತಮ್ಮ ವೈಟೇಜ್ ಏನಂತ ಗೊತ್ತಾಗಿದ್ದೇ ಮಂಗ್ಳೂರಿಗೆ ಬೆಂಕಿ ಬಿದ್ದ ಮೇಲಲ್ವೆ/ಅಷ್ಟು ಫೇಮಸ್ ಆಗೋದ್ನೇನ್ರಿ / ಸೀರಾಮ್ನಾಣ್ಗೂ ಸಾ. ನಾನೇ ಕರ್ನಾಟಕದ ಮೋದಿ ಅಂತ ಹೇಳಿ ಕಂಡಿದಿರಲ್ಲ ಸಾ/ ಸತ್ಯ ಉಂಟು. ಮೋದಿ ನನ್ನ ಗುರು ಕಣ್ರಿ. ಹಿಂದುತ್ವಕ್ಕೆ ಧಕ್ಕೆ ಆತೋ ನನ್ನ ಪ್ರಾಣ ಬಲಿ ಕೊಡ್ಲಿಕ್ಕೂ ರೆಡಿ ಕಣ್ರಿ.

ಸೋ ಗಲಭೆಗೆ ತಾವೇ ಕಾರಣ ಅಂತಿರಾ?/ ನೊನೋ. ಇದರಲ್ಲಿ ಕಾಂಗ್ರೆಸ್ನೋರ ಕೈವಾಡ ಇದೇರಿ/ ಜೆಡಿ‌ಎಸ್ ಅಧ್ಯಕ್ಷರು ತಮ್ಮ ಮೇಲೆ ಹೇಳ್ತಾ ಅವರಲ್ಲಾ/ ಆ ಬಂಗಾರನೇನ್ರಿ. ಅವನು ಕಾಂಗ್ರೆಸ್ ಏಜೆಂಟ್ ಬಿಡ್ರಿ. ಹಿಂದುತ್ವ ಉಳಿಬೇಕು ಬಾಕಿದೆಲ್ಲಾ ಅಳಿಬೇಕು. ಎಲ್ಲನೂ ಸಮ ಹಣಿತೀನಿ. ನಾನು ನನ್ನ ಧರ್ಮ ಪ್ರೀತಿಸ್ತೀನಿ. ಹಂಗೆ ಬೇರೆ ಧರ್ಮನೂ ಪ್ರೀತಿಸ್ತೀನಿ ಅನ್ನಿ. ಪೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ ಅಂತ ರಾಜ್ಕುಮಾರು ಭಾತಿ ಹೇಳೋ ಸಾಂಗ್‌ನೇ ನನಗೆ ಸ್ಪೂರ್ತಿ. ಏನೇ ನೆಡೀಲಿ ಎಲಾ ನನ್ನ ಉಸ್ತುವಾರಿನಾಗೆ ನಡೆಯೋದಂತ ಹೇಳೊಕೆ ಐ ಅಮ್ ಪ್ರೌಡ್ ಆಫ್ ಮೈಸೆಲ್ಫ್ ಕಣ್ರಿ/ ಹಂಗಾರೆ ಗಲಭೇಗೂ ತಮ್ಮ ಉಸ್ತುವಾರಿ ಇತ್ತು ಅನ್ನಿ?/ ಹಂಗಲ್ರಿ ಗಲಭೆ ನಿಯಂತ್ರಣದ ಉಸ್ತುವಾರಿ ನಂದು ಅಂತ ನಾನ್ ಹೇಳಿದ್ ಮಾರಾಯ್ರೆ. ಆ ಮಾಜಿ ಕಾಂಗ್ರೆಸ್ ಮಂತ್ರಿ ರಮಾನಾಥ ರೈ ಅವಾಂದೆ ಸ್ಕೆಚ್ಚೆಲ್ಲಾ ಬಂಗೆರಾರ-ರೈ ಇಬ್ಬರೂ ಸೇಕೊಂಡು ಗಲಭೇ ಮಾಡ್ಸಿ ನನ್ನ ತೆಲಿಗೆ ಕಟ್ಟಿದಾರ್ರಿ.

ನೀವು ಹೆಂಗ್ರಾ ಸುಮ್ಗಿದ್ದೀರಿ?/ನಾನೆಲ್ಲಿ ಸುಮ್ಗಿದ್ದೀನಿ. ಪ್ರಕಾಸ್ ಬಂದ್ರೂ ನೆಟ್ಟಗೆ ಮಾತಾಡಿಸ್ದೆ ಹೋದ. ಫೀಲಾಯ್ತು. ಗಬ್ಬು ಪೋಲಿಟ್ರಿಕ್ಸೇ ಬೇಡ ಅಂದೋನೆ ಸರ್ಕಾರಿ ಕಾರು ವ್ಯಾನು ಗನ್ ಮ್ಯಾನು ಸೆಕ್ಯುರಿಟಿ ಎಲ್ಲಾನೂ ವಾಪಸ್ ಗದುಮ್ದೆ. ರಾಜೀನಾಮೆನೂ ಬರೆದು ಒಗ್ದೆ/ಭೇಷ್ ಸಾ. ಅದ್ಸರಿ, ಈ ಗಲಭೆಗೆ ಕಾರಣ ಯಾರು ಅಂತಿರಾ?/ ತನಿಖೆ ಆಗ್ಬೇಕು ಕಣ್ರಿ. ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಅಂಡ್ ಸಿಮಿ ಸಂಘಟನೆಗಳು ಅಟ್ರಾಸಿಟಿ ಹಿಂದಿವೆ ಅಂತಾರೆ ಪ್ರಕಾಸು / ಭಜರಂಗಿಗಳೂ ಇಧಾರಂತಾರಲ್ಲ ಸಾ / ಅನ್ಲಿ ಬಿಡ್ರಿ. ಈ ಕಸಾಯಿಖಾನೆಗಳಿಗೆ ದನಗಳ ಕಳ್ಳ ಸಾಗಾಣಿಕೆ ಮಾಡ್ದೋನ ಹಿಡಿಯೋ ತಾಕತ್ತು ಪೋಲಿಸ್ರಿಗಿಲ್ಲ. ಅಂದ್ಮೇಲೆ ಅದನ್ನ ದೇಶಭಕ್ತರು ಮಾಡಿದ್ರೆ ತಪ್ಪೇನ್ರಿ?/ ಕಾನೂನು ಕೈಗೆ ತಕ್ಕಳ್ಳೋದು ತಪ್ಪಲ್ವೆ ಸಾ?/ ತಪ್ಪಲ್ಲ ಅಂತ ನಾನೆಲ್ಲಿ ಬೊಗಳಿದೇರಿ. ಆ ಮಾಣಿಗಳು ದೇಶಸೇವೆ ಮಾಡ್ತಾ ಅದಾರ್ರಿ ನಮ್ಮ ಮಾಣಿಗಳು ಎಲ್ಲಾರ ಲೂಟಿ ದಂಗೆ ದರೋಡೆ ದೌರ್ಜನ್ಯ ಮಾಡಿದ್ದಾರಾ? ಶೋ ಮಿ ಐಸೆ. ತೋರಿಸಿದ್ರೆ ನಿಂತ ನಿಲುವಿನಲ್ಲೆ ನೇಣು ಹಾಕ್ಕಂತೀನ್ರಿ ಮೈಂಡ್ ಇಟ್.

ಸೋ ಮಂಗಳೂರು ಗಲಭೆಗೆ ಇವರ ಕುಮ್ಮಕ್ಕು ಇಲ್ಲ / ಕಣಿಕೇಳ್ ಹೋಗ್ರಿ ರೀ …….. ಮಾಬ್ ಮೆಂಟಾಲಿಟಿ ಗತ್ತಿಲ್ಲೇನ್ರಿ, ಅವರು ಕೂಗಿದರು ಅಂತ ಇವರು ಕೂಗಿದರು ಅವರು ಕಲ್ಲು ಎಸೆದರು ಅಂತ ಇವರು ಕಲ್ಲು ಎಸೆದರು. ಗಲಾಟೆ ಶುರುವಾಗೋದೆ ಹಿಂಗ. ನಮ್ಮವರಷ್ಟೇ ಮತಾಂಧರಲ್ಲ. ಸಾಬರಲ್ಲೂ ಇರಲಿಕ್ಕುಂಟು. ಅವರಿಗೆಲ್ಲಾ ಕಾಂಗ್ರೆಸ್ ಸಪೋರ್ಟ್ ಮಾಡ್ತದೆ ಗೊತ್ತುಂಟಾ?

ಅದು ಹೋಗ್ಲಿ ತಾವು ರಾಜೀನಾಮೆ ನಾ ಬಿಸಾಕಿದ್ರೆ ಅದೇನಾಯ್ತು ಸಾ?/ಬಿಸಾಕ್ದೆ ಅಷ್ಟೇ/ ಹಂಗಾರೆ ಸಿ‌ಎಂಗಾಗ್ಲಿ ಪಕ್ಷದ ಅಧ್ಯಕ್ಷರಿಗಾಗ್ಲಿ ಕೊಡಲಿಲ್ಲ ಅನ್ನಿ/ ಕೂಡೋಣ ಅಂತಿದ್ದೇರಿ. ಅಷ್ಟರಲ್ಲಿ ಗಲಾಟೆ ತಣ್ಣಗಾಯಿತಲ್ಲವೋ. ನನ್ನ ಜನ ಆರಿಸಿ ಕಳಿಸಿದಾರಲ್ಲವೋ ಅವರಿಗೆ ದ್ರೋಹ ಮಾಡಿ ಪಲಾಯನವಾದ ಮಾಡ್ಲಿಕ್ಕುಂಟು. ಅಷ್ಟಕ್ಕೂ ಇದು ಪುಟಗೋಸಿ ಕೋಮು ಗಲಭೆ. ಬಿದ್ದಿರೋದು ಎಲ್ಡೇ ಹೆಣ. ಇಷ್ಟಕ್ಕೆ ರಾಜಿನಾಮೆ ಕೊಡೋಕೆ ನಾನೇನ್ ಹುಚ್ಚುಪ್ಯಾಲೆ ನೇನ್ರಿ/ಹಂಗಾರೆ ನಿಮ್ಮ ಉಸ್ತುವಾರಿನಾಗೆ ಭಾರಿ ಕೋಮು ಗಲಭೆ ಆಗೋದದೆ. ಭರ್ಜರಿ ಹೆಣ ಬೀಳೋದದೆ ಅಂತಿರೇನು? ಹಂಗಾರೆ ನೆಕ್ಸ್ಟ್ ಯಾವಾಗ್ಸಾ ಮಂಗ್ಳೂನಾಗೆ ಕೋಮುಗಲಭೆ/ ಏನ್ರಿ ನನ್ಗೇ ಫಿಟ್ಟಿಂಗ್ ಇಡ್ತಿರೇನ್ರಿ? ಇಡ್ರಿ ಫೋನು/ನಾಗ್ರಾವು ಸೆಟ್ಟಿ ಬುಸುಗುಟ್ಟುತ್ತಾ ತಾನೇ ಫೋನಿಟ್ಟ.
*****
( ದಿ. ೦೯-೧೧-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಮಣ್ಣೊಳಗೆ…
Next post ಕಲ್ಲಾಯಿತೆ ಎದೆ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

cheap jordans|wholesale air max|wholesale jordans|wholesale jewelry|wholesale jerseys